ಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಹಿರೇಮಠ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಮೀನಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯೊಬ್ಬಳನ್ನು ಚಾಕುವಿನಿಂದ ಇರಿದು ಹತ್ಯೆಗೈದ ಇನ್ನೊಂದು ಘಟನೆ ಹುಬ್ಬಳ್ಳಿ ತಾಲೂಕಿನ ವೀರಾಪುರದಲ್ಲಿ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಆರೋಪಿಯನ್ನು ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ (21) ಎಂದು ಗುರುತಿಸಲಾಗಿದೆ. ಈತ ವೀರಾಪುರ ಓಣಿಯ ದೇವಿಗುಡಿ ನಿವಾಸಿ ಅಂಜಲಿ ಅಂಬಿಗೇರ (20) ಎಂಬಾಕೆಯನ್ನು ಕಳೆದ ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದು, ಆದರೆ ಅಂಜಲಿ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇಂದು ಬೆಳಗ್ಗೆ ಯುವತಿಯ ಮನೆಯ ಬಾಗಿಲು ತಟ್ಟಿದ ಗಿರೀಶ್, ಬಾಗಿಲು ತೆರೆಯುತ್ತಿದ್ದಂತೆಯೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಮೊದಲೇ ಕೊಲೆ ಬೆದರಿಕೆ ಹಾಕಿದ್ದ ಆರೋಪಿ:
ಪೊಲೀಸ್ ಇಲಾಖೆಯ ನಿರ್ಲಕ್ಷ ನಿಂದ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ. ಅಂಜಲಿಗೆ ಈ ಮೊದಲು ಆರೋಪಿ ಗಿರೀಶ್ ಸಾವಂತ್ ಬೆದರಿಕೆ ಹಾಕಿದಾಗ ನಾವು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆವು. ಆದರೆ, ಅಲ್ಲಿಯ ಅಧಿಕಾರಿಗಳು ಏನೂ ಆಗಿಲ್ಲ, ಯಾರು ಯಾರನ್ನೂ ಕೊಲೆ ಮಾಡುವುದಿಲ್ಲ ಎಂದು ವಾಪಸ್ ಕಳುಹಿಸಿದ್ದರು. ಅವತ್ತೇ ಗಿರೀಶ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಅಂಜಲಿಯ ಅಜ್ಜಿ ಗಂಗವ್ವ ಕಣ್ಣೀರು ಸುರಿಸಿದರು.